ಎರ್ತಿಲ್ಯಾ, ಈ ಥೂನ್ಯೀಗಾ, ಆಲೋನ್ಸೋ ದಾ: 1533-94 ಸ್ಪೇನಿನ ಕವಿ. ಚಿಲಿ ದೇಶವನ್ನು ಸ್ಪೇನಿನ ಸೈನ್ಯಗಳು ಆಕ್ರಮಿಸಿದಾಗ ಆ ಯುದ್ಧಗಳಲ್ಲಿ ಭಾಗವಹಿಸಿ ಅದೇ ವಸ್ತುವಿನ ಮೇಲೆ ಲಾ ಅರೌಕಾನಾ ಎಂಬ ಭವ್ಯ ಕಾವ್ಯವನ್ನು ಬರೆದ. ಸ್ಪೇನ್ ರಾಜ್ಯವನ್ನು ವಿಸ್ತರಿಸಿ ಕ್ರೈಸ್ತಧರ್ಮ ಹರಡುವುದು ತನ್ನ ಕರ್ತವ್ಯವೆಂದು ನಂಬಿದ್ದರೂ ಕವಿಗೆ ಅಮೆರಿಕದ ಮೂಲನಿವಾಸಿಗಳಲ್ಲಿ ವಿಶೇಷ ಸಹಾನುಭೂತಿಯಿತ್ತು. ಅವನ ದೃಷ್ಟಿಯಲ್ಲಿ ಅವರು ಉದಾತ್ತ ಅನಾಗರಿಕರು. ರೆಡ್ ಇಂಡಿಯನ್ ವೀರ ಕೌಪಲಿಕಾನ್ ಈ ಕಾವ್ಯದ ನಾಯಕ. ಯುದ್ಧದಲ್ಲಿ ರೆಡ್   ಇಂಡಿಯನ್ ಜನರಿಗೆ ಒದಗಿದ ಅಪಜಯ ಮತ್ತು ನಾಯಕನಿಗೆ ಸಂಭವಿಸಿದ ಮರಣದಂಡನೆಯ ಸನ್ನಿವೇಶಗಳು ಹೃದಯವಿದ್ರಾವಕ ವಾಗಿಯೂ ವೀರೋಚಿತವಾಗಿಯೂ ಚಿತ್ರಿತವಾಗಿವೆ. ಪ್ರಕೃತಿ, ಜನಜೀವನ ಮತ್ತು ಯುದ್ಧ ಕೌಶಲಗಳ ವರ್ಣನೆಯಲ್ಲೂ ಉಪಮಾನಗಳಲ್ಲೂ  ರೆಡ್ ಇಂಡಿಯನ್ ಜನರ ಪ್ರಪಂಚ ಪ್ರತಿಬಿಂಬಿತವಾಗಿರುವುದು ಕಾವ್ಯದ ಒಂದು ವೈಶಿಷ್ಟ.  (ಎಂ.ಕೆ.ಕೆ.ಕೆ; ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ